ಮಲ್ಪೆ: ಆನ್‌ಲೈನ್ ಟಾಸ್ಕ್ ಮಾಯಾಜಾಲ: ಮಲ್ಪೆಯ ಮಹಿಳೆಗೆ ಲಕ್ಷಾಂತರ ರೂ ನಷ್ಟ

  • 23 Jul 2025 09:25:20 PM


ಮಲ್ಪೆ: ಆನ್‌ಲೈನ್ ಮೂಲಕ ಷೇರು ಬಿಡ್ಡಿಂಗ್‌ಗೆ ಹಣ ಹೂಡಿಕೆ ಮಾಡಿದ ಬಡಾನಿಡಿಯೂರಿನ ಕವಿತಾ ಪಿ. ಎಂಬ ಮಹಿಳೆ ವಂಚಕರ ಬಲೆಗೆ ಬಿದ್ದು ರೂ.3.93 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.

 

ಜುಲೈ 15ರಂದು ದಿವ್ಯಾಶರ್ಮ ಎಂಬಾತ ಎನ್‌ಎಸ್‌ಇ ಕಂಪೆನಿಯ ಕುರಿತು ಟೆಲಿಗ್ರಾಮ್‌ನಲ್ಲಿ ಮಾಹಿತಿ ನೀಡಿ ವೀಡಿಯೋ ಜಾಹೀರಾತು ಲೈಕ್ ಮಾಡಬೇಕು ಎಂದು ಸೂಚಿಸಿದ್ದ. ಆ ಬಳಿಕ ಟಾಸ್ಕ್ ಪೂರ್ಣಗೊಳಿಸಲು ಹಣ ಹೂಡಿಕೆ ಮಾಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಕವಿತಾ ಜುಲೈ 17ರಂದು ಮೊದಲವಾಗಿ ₹4,999 ಗೂಗಲ್ ಪೇ ಮೂಲಕ ಕಳುಹಿಸಿದ್ದರು.

 

ಆ ಬಳಿಕ ಕೂಡಲೆ ₹15,000, ₹30,000, ₹50,000, ₹1 ಲಕ್ಷ ಹಾಗೂ ₹1,93,130 ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ ಒಟ್ಟು ₹3,93,129 ವಂಚಿಸಿದ್ದಾರೆ ಎಂದು ಕವಿತಾ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

 

 ಇದೀಗ ಮಲ್ಪೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.