ಯೆಮನ್: ಯೆಮೆನ್ ನಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲುಶಿಕ್ಷೆಗೆ ಒಳಗಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಎಂದು ಗ್ಲೋಬಲ್ ಪೀಸ್ ಇನಿಶಿಯೇಟಿವ್‌ನ ಸಂಸ್ಥಾಪಕ ಡಾ. ಕೆ.ಎ. ಪೌಲ್ ಮಂಗಳವಾರ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
2017ರ ಯೆಮೆನ್ ಪ್ರಜೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ನರ್ಸ್ ನಿಮಿಷಗೆ ಮರಣದಂಡನೆ ವಿಧಿಸಲಾಗಿದ್ದು, ಈ ವರ್ಷ ಜುಲೈ 16ರಂದು ಗಲ್ಲು ಶಿಕ್ಷೆ ನಿಗದಿಯಾಗಿತ್ತು.
ಆದರೆ ಭಾರತೀಯ ನಾಯಕರ ರಾಜತಾಂತ್ರಿಕ ಹಸ್ತಕ್ಷೇಪದಿಂದಾಗಿ ಶಿಕ್ಷೆಯನ್ನು ಮುಂದೂಡಲಾಗಿತ್ತು.
ಇದೀಗ ಕೆ.ಎ. ಪೌಲ್ ಅವರು ಯೆಮೆನ್ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿ ಇರುವ ನಿಮಿಷಾ ಪ್ರಿಯಾ ಅವರ ಶಿಕ್ಷೆ ರದ್ದಾಗಿದೆ ಎಂಬುದಾಗಿಯೂ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ನಡೆದ ತೀವ್ರ ರಾಜತಾಂತ್ರಿಕ ಚಟುವಟಿಕೆ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಇದರ ಹಿಂದೆ ಪ್ರವರ್ತಿಸಿರುವ ಇತರ ನಾಯಕರ ಸಹಕಾರಕ್ಕೆ ಡಾ. ಪೌಲ್ ಧನ್ಯವಾದವನ್ನು ಅರ್ಪಿಸಿದ್ದಾರೆ.