ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳುಪೇಟೆ ಎಂಬ ಗ್ರಾಮದಲ್ಲಿನ ಖಾಸಗಿ ಶಾಲೆಯಲ್ಲಿ ಮಾನವೀಯತೆಯನ್ನು ಮರೆತ ಶಿಕ್ಷಕಿಯೊಬ್ಬರು ಪುಟ್ಟ ವಿದ್ಯಾರ್ಥಿಗೆ ಬಾಸುಂಡೆ ಬರುವ ಹಾಗೆ ಹೊಡೆದ ಘಟನೆ ನಡೆದಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ದಿವಾಕರ್ ಗೌಡ ಎಂಬ 1ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿ ರಜನಿ ಅವರು ಕ್ಷುಲ್ಲಕ ತಪ್ಪಿಗೆ ತೀವ್ರವಾಗಿ ಹೊಡೆದಿದ್ದು, ಬಾಲಕ ಆಸ್ಪತ್ರೆಗೆ ಸೇರುವಂತಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಾಲಕನ ಪೋಷಕರಾದ ರಂಗಸ್ವಾಮಿ ಮತ್ತು ಕಾವ್ಯ ಕೂಲಿ ಕಾರ್ಮಿಕರಾಗಿದ್ದು, ಮಗನ ಉತ್ತಮ ಭವಿಷ್ಯಕ್ಕಾಗಿ ಖಾಸಗಿ ಶಾಲೆಗೆ ಸೇರಿಸಿದ್ದರು. ಆದರೆ ಶಿಕ್ಷಕಿಯಿಂದ ಈ ತರಹದ ಪ್ರವೃತ್ತಿ ಕಂಡು ಈ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡುವುದಕ್ಕಾಗಿ ಪೋಷಕರು ಮುಂದಾಗಿದ್ದಾರೆ.