ಮಂಗಳೂರು: ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳೂರಿನಲ್ಲಿ ಅಕ್ರಮವಾಗಿ ಹೆಬ್ಬಾವು ಮಾರಾಟ ಜಾಲವನ್ನು ಭೇದಿಸಿ, ಅಪ್ರಾಪ್ತ ಯುವಕನನ್ನು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳು ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಉಳ್ಳಾಲದ ಸಾಕುಪ್ರಾಣಿ ಅಂಗಡಿ ಮಾಲೀಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಅಂಗಡಿಯ ಉದ್ಯೋಗಿ ಮೊಹಮ್ಮದ್ ಮುಸ್ತಫಾ (22) ಹಾಗೂ ಮಂಗಳೂರಿನ ಪ್ರಥಮ ಪಿಯುಸಿ ವಿದ್ಯಾರ್ಥಿ (16) ಎಂಬ ಮಾಹಿತಿ ಲಭ್ಯವಾಗಿದೆ.
ಅರಣ್ಯ ರೇಂಜ್ ಅಧಿಕಾರಿ ರಾಜೇಶ್ ಬಾಳಿಗಾರ್ ನೇತೃತ್ವದ ತಂಡವು ಮಾರು ವೇಷದಲ್ಲಿ ಹೆಬ್ಬಾವು ಖರೀದಿಸುವ ನೆಪದಲ್ಲಿ ವಿಹಾಲ್ ಶೆಟ್ಟಿಯನ್ನು ಸಂಪರ್ಕಿಸಿ, ಕದ್ರಿಯ ಅಶ್ವತ್ಥ ಕಟ್ಟೆ ಬಳಿ ಬೆಲೆ ನಿಗದಿಪಡಿಸಿ ಖರೀದಿಸುವಂತೆ ಮಾತನಾಡಿ ಈ ಸಂದರ್ಭ ಅವನನ್ನು ವಶಕ್ಕೆ ಪಡೆದುಕೊಂಡರು
ವಿಚಾರಣೆ ವೇಳೆ ಅಪ್ರಾಪ್ತನಿಂದ ಹಾವು ದೊರೆತ ಕುರಿತಾಗಿ ಮಾಹಿತಿ ನೀಡಿದ ಆತನ ಮುಖಾಂತರ 16 ವರ್ಷದ ಬಾಲಕನನ್ನು ಬಂಧಿಸಲಾಯಿತು.
ಈ ನಡುವೆ, ಸ್ಟೇಟ್ ಬ್ಯಾಂಕ್ ಬಳಿಯ ಸಾಕುಪ್ರಾಣಿ ಅಂಗಡಿಯಲ್ಲಿ ಅಕ್ರಮ ವನ್ಯಜೀವಿ ವ್ಯಾಪಾರದ ಮಾಹಿತಿ ಮೇರೆಗೆ ದಾಳಿ ನಡೆಸಿ ಅಂಗಡಿ ಮಾಲೀಕ ಮತ್ತು ಸಿಬ್ಬಂದಿಯನ್ನೂ ಕೂಡ ಬಂಧಿಸಲಾಯಿತು. ಅಲ್ಲಿಂದ ನಕ್ಷತ್ರ ಆಮೆಗಳ ಮಾರಾಟ ನಡೆಯುತ್ತಿದ್ದು ಅವುಗಳನ್ನು ಸಹ ವಶಪಡಿಸಿಕೊಳ್ಳಲಾಯಿತು.
ಬಂಧಿತರ ಆರೋಪಿಗಳು ಭಾರತೀಯ ರಾಕ್ ಹೆಬ್ಬಾವುಗಳನ್ನು ವಿದೇಶಿ ಬರ್ಮೀಸ್ ಬಾಲ್ ಪೈಥನ್ ಎಂಬ ಹೆಸರು ನೀಡಿದಂತೆ ಸಾಗಾಣಿಕೆ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಇವರ ವಿರುದ್ಧ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸಾರ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಜಾಲವು ತಮಿಳುನಾಡಿನವರೆಗೂ ವ್ಯಾಪಿಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು , ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಥೋನಿ ಮರಿಯಪ್ಪ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ. ಕ್ಲಿಫರ್ಡ್ ಲೋಬೊ ಅವರ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರು : ಅಕ್ರಮ ಹೆಬ್ಬಾವು ಮಾರಾಟ ಜಾಲ ಭೇದನೆ ;ವಿದ್ಯಾರ್ಥಿ ಸಹಿತ ನಾಲ್ವರ ಬಂಧನ