ಆರ್ಲಪದವು: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಪುತ್ತೂರು – ಪಣಜೆ – ಪೆರ್ಲ ರಾಜ್ಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಸಂಚಾರ ಸ್ಥಗಿತ

  • 17 Jul 2025 01:47:21 PM


ಆರ್ಲಪದವು: ಪುತ್ತೂರು–ಪಣಜೆ–ಪೆರ್ಲ ರಾಜ್ಯ ಹೆದ್ದಾರಿಯ ಆರ್ಲಪದವು–ಕೊರಿಂಗಿಲ ನಡುವೆ ಇರುವ ಬೆಟ್ಟ ಪ್ರದೇಶದಲ್ಲಿ ಇಂದು ಬೆಳಗ್ಗೆ ಗುಡ್ಡ ಕುಸಿತ ಸಂಭವಿಸಿದ್ದು, ಪರಿಣಾಮವಾಗಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.

 

ಭಾರಿ ಮಳೆಯ ಕಾರಣದಿಂದಾಗಿ ಮಣ್ಣು, ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಧರೆಗುರುಳಿದ್ದು, ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದೆ. ಸ್ಥಳೀಯರ ಅಭಿಪ್ರಾಯದಂತೆ, ಈ ವರ್ಷದ ಅತಿಯಾದ ಮಳೆಯಿಂದಾಗಿ ಗುಡ್ಡಕುಸಿದಿದೆ ಎನ್ನಲಾಗಿದೆ.

 

ಸದ್ಯದ ಪರಿಸ್ಥಿತಿಯಲ್ಲಿ ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಪರ್ಯಾಯ ಮಾರ್ಗದ ಮೂಲಕ ಸಂಚಾರ ವ್ಯವಸ್ಥೆ ಮಾಡಲಾಗಿದೆ.

 

ಘಟನಾ ಸ್ಥಳದಲ್ಲಿ ಈಗಾಗಲೇ ತೆರವು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಸಾರ್ವಜನಿಕರ ಸಹಕಾರದಿಂದ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ.