ಉಡುಪಿ: ಮೀನು ಹಿಡಿಯಲೆಂದು ಕಡಲಿಗೆ ನಾಡದೋಣಿಯಲ್ಲಿ ತೆರಳಿದ ಮೂವರು ಮೀನುಗಾರರು ನೀರುಪಾಲು; ಓರ್ವ ಅಪಾಯದಿಂದ ಪಾರು!

  • 15 Jul 2025 03:55:38 PM


ಉಡುಪಿ: ಮೀನುಗಾರಿಕೆಗೆಂದು ನಾಡದೋಣಿಯಲ್ಲಿ ಸಮುದ್ರಕ್ಕೆ ತೆರಳಿದ್ದ ವೇಳೆ ಉಂಟಾದ ಭಾರೀ ಅಲೆಗಳ ರಭಸಕ್ಕೆ ನಾಡದೋಣಿ ಮಗುಚಿದ ಪರಿಣಾಮ ಮೂವರು ಮೀನುಗಾರರು ನೀರುಪಾಲಾದ ಹೃದಯವಿದ್ರಾವಕ ಘಟನೆ ಉಡುಪಿಯ ಗಂಗೊಳ್ಳಿ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.

 

ನೀರುಪಾಲಾದವರು ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48), ಗಂಗೊಳ್ಳಿ ಬೇಲಿಕೆರಿ ನಿವಾಸಿ ಲೋಹಿತ್ ಖಾರ್ವಿ (35), ಹಾಗೂ ಮಲ್ಯಾರುಬೆಟ್ಟು ನಿವಾಸಿ ಜಗದೀಶ್ ಖಾರ್ವಿ (50) ಎಂಬವರು ಎಂದು ಗುರುತಿಸಲಾಗಿದೆ.

 

ಸಿಪಾಯಿ ಸುರೇಶ್ ಅವರ ಮಾಲೀಕತ್ವದ ನಾಡದೋಣಿಯಲ್ಲಿ ನಾಲ್ಕು ಮಂದಿ ಮೀನುಗಾರರು ಮುಂಜಾನೆ ಮೀನುಗಾರಿಕೆಗೆ ತೆರಳಿದ್ದು, ಕಡಲಿನ ಸ್ಥಿತಿ ಸಹಜವಾಗಿರದೇ ಇರುವುದರಿಂದ ಅಲೆಗಳು ತೀವ್ರತೆ ಹೆಚ್ಚಿದ್ದ ಸ್ಥಿತಿಯನ್ನು ಗಮನಿಸಿದ ಮೀನುಗಾರರು ದಡದತ್ತ ವಾಪಸ್ ಬರಲು ಪ್ರಯತ್ನಿಸುತಿದ್ದ ವೇಳೆ ನಾಡದೋಣಿ ತೂಗು ಬಿದ್ದು ಮಗುಚಿದೆ ಎನ್ನಲಾಗಿದೆ.

 

ದೋಣಿಯಲ್ಲಿ ಇದ್ದ ನಾಲ್ವರು ಮೀನುಗಾರರು ನೀರಿಗೆ ಬಿದ್ದಿದ್ದು, ಅವರಲ್ಲಿ ಒಬ್ಬರಾದ ಸಂತೋಷ ಖಾರ್ವಿ ಎಂಬಾತ ಈಜಿ ಇತರ ದೋಣಿಗೆ ತಲುಪಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ಇನ್ನುಳಿದ ಮೂವರಿಗಾಗಿ ಗಂಗೊಳ್ಳಿ ಸಮುದ್ರ ತೀರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರೆಯುತ್ತಿದೆ