ಮಂಗಳೂರು: ಮಂಗಳೂರಿನ ರಿತುಪರ್ಣ ಕೆ.ಎಸ್ (20)ವಿಶ್ವದ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆ ರೋಲ್ಸ್ ರಾಯ್ಸ್ (Rolls-Royce, USA)ನಲ್ಲಿ ಉದ್ಯೋಗ ಪಡೆಯುವ ಮೂಲಕ ಕರ್ನಾಟಕದ ಹೆಮ್ಮೆ ಎನಿಸಿಕೊಂಡಿದ್ದಾರೆ.
ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೋಬೋಟಿಕ್ಸ್ ಮತ್ತು ಆಟೋಮೇಷನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಕಿರಿಯ ವಯಸ್ಸಿನಲ್ಲಿಯೇ ಇಂತಹ ಉನ್ನತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ರಾಜ್ಯದ ಮೊದಲ ಯುವತಿಯೆಂದು ಗುರುತಿಸಲ್ಪಟ್ಟಿದ್ದಾರೆ.
ಕಂಪನಿಯಿಂದ ಆಯೋಜಿಸಲಾಗಿದ್ದ 8 ತಿಂಗಳ ಟಾಸ್ಕ್ ಟೆಸ್ಟ್‌ನಲ್ಲಿ ತಾವು ತೋರಿದ ತಾಂತ್ರಿಕ ಕೌಶಲ್ಯ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಶಿಸ್ತುಪೂರ್ಣ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದ Rolls-Royce ಸಂಸ್ಥೆಯು ರಿತುಪರ್ಣಗೆ ನೇರವಾಗಿ ನೇಮಕಾತಿ ಪತ್ರ ನೀಡಿದೆ.
ವಾರ್ಷಿಕ ₹72.3 ಲಕ್ಷ ಸಂಬಳದ ಈ ಉದ್ಯೋಗ, ಅಮೆರಿಕದ ಶಾಖೆಯಲ್ಲಿ ತಾಂತ್ರಿಕ ವಿಭಾಗಕ್ಕೆ ಸಂಬಂಧಿಸಿದ್ದಾಗಿದೆ.
ಇನ್ನೆರಡು ತಿಂಗಳಲ್ಲಿ ಅಮೆರಿಕಕ್ಕೆ ತೆರಳಲಿರುವ ರಿತುಪರ್ಣ, ತಮ್ಮ ಈ ಸಾಧನೆಗೆ ಪೋಷಕರ ಹಾಗೂ ಕಾಲೇಜಿನ ಪೂರಕ ಸಹಕಾರವಿತ್ತು ಎಂದು ತಿಳಿಸಿದ್ದಾರೆ.
ಮಗಳ ಸಾಧನೆಗೆ ಹೆತ್ತವರು ಮತ್ತು ಕಾಲೇಜ್ ಆಡಳಿತ ಮಂಡಳಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.