ಅಹ್ಮದಾಬಾದ್/ ಚೆನ್ನೈ: ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ: ಚೆನ್ನೈ ಮೂಲದ ಮಹಿಳೆ ಅಹಮದಾಬಾದ್‌ನಲ್ಲಿ ವಶಕ್ಕೆ!

  • 24 Jun 2025 03:14:35 PM


ಅಹ್ಮದಾಬಾದ್/ ಚೆನ್ನೈ: ನಗರದ ಖಾಸಗಿ ಶಾಲೆಗೆ ಇ-ಮೇಲ್ ಮೂಲಕ ಬಂದಿದ್ದ ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಚೆನ್ನೈ ಮೂಲದ ಮಹಿಳೆಯೊಬ್ಬರನ್ನು ಅಹಮದಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

 ಆರೋಪಿ ರೆನೆ ಜೋಶಿಲ್ಡಾ ಎಂಬಾಕೆ, ಎಲೆಕ್ಟ್ರಿಕಲ್ ಇಂಜಿನಿಯರ್ ಆಕೆ ಐಟಿ ಸಂಸ್ಥೆಯಲ್ಲಿ ಹಿರಿಯ ಸಲಹೆಗಾರೆಯಾಗಿ ಕಾರ್ಯನಿರ್ವಹಿಸುತ್ತಿದ್ದಳು.

 

ಹುಸಿ ಇ-ಮೇಲ್ ಐಡಿ ಮತ್ತು ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಬಳಸಿ ಈ ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಿದ್ದಳು. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ದೆಹಲಿ, ರಾಜಸ್ಥಾನ, ಬಿಹಾರ, ತೆಲಂಗಾಣ, ಪಂಜಾಬ್, ಕೇರಳ, ಮಧ್ಯಪ್ರದೇಶ ಮತ್ತು ಹರಿಯಾಣ ಸೇರಿ 12ಕ್ಕೂ ಹೆಚ್ಚು ರಾಜ್ಯಗಳಿಗೆ ಈಕೆಯು ಒಟ್ಟು 21 ಇ-ಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳನ್ನು ನೀಡಿದ್ದಾಳೆ ಎಂದು ತನಿಖೆ ನಡೆಸಿರುವ ಸೈಬರ್ ಕ್ರೈಂ ವಿಭಾಗ ತಿಳಿಸಿದೆ.

 

ಆರೋಪಿಯು ನಕಲಿ ಇ-ಮೇಲ್ ಐಡಿ, ವಿಪಿಎನ್, ವರ್ಚುವಲ್ ಸಂಖ್ಯೆ ಹಾಗೂ ಡಾರ್ಕ್ ವೆಬ್‌ನ ತಂತ್ರಜ್ಞಾನಗಳನ್ನು ಬಳಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುವ ಉದ್ದೇಶದಿಂದ ಇ-ಮೇಲ್‌ಗಳನ್ನು ಕಳುಹಿಸಿದ್ದಾಳೆ ಎಂದು ತಿಳಿದು ಬಂದಿದೆ.

 

 

ಅಹಮದಾಬಾದ್‌ನ ಸರ್ಖೇಜ್ ಪ್ರದೇಶದ ಜಿನೇವಾ ಲಿಬರಲ್ ಶಾಲೆಗೆ ಜೂನ್ 3 ರಂದು ಬೆಳಿಗ್ಗೆ 10:58ಕ್ಕೆ divijprabhakaraO@gmail.com ಇ-ಮೇಲ್ ಐಡಿಯಿಂದ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಷ್ಣುಭಾಯಿ ಚಮನ್‌ಭಾಯಿ ಖಖಾಡಿಯಾ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

 

ಜಂಟಿ ಪೊಲೀಸ್ ಆಯುಕ್ತ ಶರದ್ ಸಿಂಘಾಲ್, ಡಿಸಿಪಿ ಡಾ. ಲವಿನಾ ಸಿನ್ಹಾ ಹಾಗೂ ಎಸಿಪಿ ಹಾರ್ದಿಕ್ ಮಕಾಡಿಯಾ ನೇತೃತ್ವದಲ್ಲಿ ಸೈಬರ್ ಕ್ರೈಂ ತಂಡ ತನಿಖೆ ನಡೆಸಿ, ಮಹಿಳೆಯ ಸ್ಥಳ ಮತ್ತು ಗುರುತನ್ನು ಪತ್ತೆ ಹಚ್ಚಿದರು. ನಿಖರ ಪುರಾವೆಗಳ ಆಧಾರದಲ್ಲಿ ಚೆನ್ನೈಗೆ ತಂಡ ಕಳುಹಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಕಾನೂನು ಪ್ರಕ್ರಿಯೆ ನಡೆಯುತ್ತಿದೆ.

 

 

ಈ ಕುರಿತು ಪ್ರತಿಕ್ರಿಯಿಸಿದ ಉಡುಪಿ ಎಸ್‌ಪಿ ಹರಿರಾಮ್ ಶಂಕರ್, “ಆರೋಪಿಯನ್ನು ತನಿಖೆಗೆ ನಮ್ಮ ಹಸ್ತಾಂತರಕ್ಕೆ ನೀಡುವಂತೆ ಅಹಮದಾಬಾದ್ ಪೊಲೀಸರಿಗೆ ಪತ್ರ ಬರೆದಿದ್ದಾರೆ.

 

 ಅವರು ತನಿಖೆ ಮುಗಿಸಿದ ನಂತರ ಆರೋಪಿಯನ್ನು ಉಡುಪಿಗೆ ತರುವ ನಿರೀಕ್ಷೆಯಿದೆ" ಎಂಬುದಾಗಿ ಹೇಳಿದ್ದಾರೆ.